ರಾಮು ಕರಿಯಾತ್
1927-79. ಪ್ರಸಿದ್ಧ ಮಲಯಾಳ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ. 1927 ರಲ್ಲಿ ಕೇರಳದ ತ್ರಿಶ್ಯೂರ್ ಜಿಲ್ಲೆಯ ಏಂಗಂಡಿಯೂರ್‍ನ ರೈತ ಕುಟುಂಬದಲ್ಲಿ ಜನಿಸಿದರು. ಹದಿಹರಯದಲ್ಲಿಯೇ ಮಾತೃಭೂಮಿ ವಾರಪತ್ರಿಕೆಗೆ ಪದ್ಯಗಳನ್ನೂ ಲೇಖನಗಳನ್ನೂ ಬರೆಯುತ್ತಿದ್ದರು. ತಿರುಮಲ ಚಲನಚಿತ್ರಕ್ಕೆ ಪಿ. ಆರ್. ಎ. ಪಿಳ್ಳೈ ಮತ್ತು ವಿಮಲ್‍ಕುಮಾರ್ ಅವರಿಗೆ ಸಹಾಯಕರಾಗಿ (1953) ದುಡಿದರು. ಅನಂತರ ಭಾಸ್ಕರನ್ ಜೊತೆಗೂಡಿ ನೀಲಕ್ಕುಯಿಲ್ ಚಲನಚಿತ್ರವನ್ನು ನಿರ್ದೇಶಿಸಿದರು (1954). 1961ರ ಹೊತ್ತಿಗೆ ಮಲಯಾಳ ಚಿತ್ರಗಳನ್ನು ಸ್ವತಂತ್ರವಾಗಿ ನಿರ್ದೇಶಿಸತೊಡಗಿದರು. ಮಿನ್ನಾಮಿನುಂಗು ಇವರ ಸ್ವತಂತ್ರ ನಿರ್ದೇಶನದ ಮೊದಲ ಚಲನಚಿತ್ರ. ಇವರು ಮಲಯಾಳ ಭಾಷೆಯ ಅನೇಕ ಪ್ರಸಿದ್ಧ ಬರೆಹಗಾರರನ್ನು ಚಲನಚಿತ್ರ ರಂಗಕ್ಕೆ ಪರಿಚಯಿಸಿದರು. ತೋಪ್ಪಿಲ್‍ಭಾಷಿ, ಊರುಬ್, ಎಸ್.ಎಲ್. ಪುರಂ ಸದಾನಂದನ್, ತಕಳಿ ಶಿವಶಂಕರ ಪಿಳ್ಳೈ, ಕೆ.ಟಿ. ಮಹಮ್ಮದ್ - ಹೀಗೆ ಪರಿಚಯವಾದವರಲ್ಲಿ ಮುಖ್ಯರು. ಕರಿಯಾತ್ ತಮ್ಮ ಚಿತ್ರಗಳಲ್ಲಿ ಜನಸಾಮಾನ್ಯರ ಬದುಕು ಬವಣೆಗಳನ್ನು ನೈಜವಾಗಿ ಬಿಂಬಿಸಿದರು. ಹೀಗೆ ಮಾಡುವ ಹೊತ್ತಿನಲ್ಲಿ ಅದಕ್ಕೆ ಹೊಂದಿಕೆಯಾಗುವ ಜನಪದ ಸಂಗೀತವನ್ನು ಅಳವಡಿಸಿಕೊಂಡರು. ಮಲಯಾಳ ಚಲನಚಿತ್ರರಂಗ ಹೊಸ ಸಂವೇದನೆ, ಅನ್ವೇಷಣೆಗಳ ಮೂಲಕ ಬೆಳೆಯಲು ಇವರು ದಾರಿ ಮಾಡಿಕೊಟ್ಟರು. ಮಾಕ್ರ್ಸಿಸ್ಟ್ ಧೋರಣೆಗಳು ಹಾಗೂ ಸಾಂಸ್ಕøತಿಕ ಪುನರುತ್ಥಾನದ ಚಿಂತನೆಗಳನ್ನು ತಮ್ಮ ಚಿತ್ರಗಳಲ್ಲಿ ಬಿಂಬಿಸುವುದರ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿದರು. ಇವರು 15 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನೀಲಕ್ಕುಯಿಲ್ (1954), ಮಿನ್ನಾಮಿನುಂಗು(1961), ಮುಡಿಯನಯ ಪುತ್ರನ್ (1963), ಮೂಡುಪಡಂಮಾಯ (1976), ನೆಲ್ಲು (1976), ದ್ವೀಪ (1978), ಅಮ್ಮುವಿನ್‍ಟೆ ಆಟ್ಟಿನ್ ಕುಟ್ಟಿ (1979), ಕರಿಂಬು. ಇವರ ಚೆಮ್ಮೀನ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿದೆ.

ಕರಿಯಾತ್ ಅವರು ನಟರಾಗಿಯೂ ಕೆಲಸ ಮಾಡಿದ್ದಾರೆ. ಭಾಸ್ಕರನ್ ನಿರ್ದೇಶಿಸಿದ ರಾರಿಚ್ಚನ್ ಎನ್ನ ಪೌರನ್ ಚಿತ್ರದಲ್ಲಿ ನಟಿಸಿದ್ದಾರೆ. ಲಕ್ಷ್ಮಣನ್ ನಿರ್ದೇಶನದ ಕನ್ನಮ್ಮ ಎಂಬ ತಮಿಳು ಚಿತ್ರಕ್ಕೆ ಇವರು ನಿರ್ಮಾಪಕರಾಗಿದ್ದರು. ಇವರ ಕೊನೆಯ ಚಿತ್ರ ಕರಿಂಬುವನ್ನು ಕೆ. ವಿಜಯನ್ ಪೂರ್ಣಗೊಳಿಸಿದರು (1984). ಸ್ವಲ್ಪಕಾಲ ಕೇರಳ ರಾಜ್ಯದ ಲೋಕಸಭಾ ಸದಸ್ಯರಾಗಿದ್ದ ಇವರು 1979 ರಲ್ಲಿ ನಿಧನ ಹೊಂದಿದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ